ಚಾರಣ ಹೋಗಬೇಕೆಂದು ತುಂಬಾ ದಿನದಿಂದ ಅಂದುಕೊಂಡ ಆಸೆ ಕೈ ಗೂಡಿತು. ನರಸಿಂಹ ಪರ್ವತಕ್ಕೆ ಹೋಗುವ ದಿನ ಭಾನುವಾರ 11-2-2024 ಬೆಳಿಗ್ಗೆ 7:30 ಕ್ಕೆ ಕಿಗ್ಗಾ ದೇವಸ್ಥಾನದ ಮುಂದೆ ಚುಮು ಚುಮು ಮುಂಜಾನೆಯಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಮತ್ತು ಪೋಷಕರು ಬಂದು ಸೇರಿದೆವು. ಪರ್ವತವನ್ನು 8 ಗಂಟೆಗೆ ಹತ್ತಲು ಶುರುಮಾಡಿದೆವು.
ನನಗಂತೂ ಇದು ಮೊದಲ ಅನುಭವ. ತುಂಬಾನೆ ಖುಷಿ ಯಾಗಿದ್ದೆ. ಸುತ್ತ ಮುತ್ತ ಇರುವ ಗಿಡ ಮರಗಳು ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿಯನ್ನು ನೋಡಿ ನಾನು ತುಂಬಾ ಸಂತೋಷ ಪಟ್ಟೆ. ಕಾಡಿನ ಮಧ್ಯೆ ಪುಟ್ಟದಾದ ಕಾಲುದಾರಿಯಲ್ಲಿ ಅಂತೂ ಅರ್ಧ ಪರ್ವತವನ್ನು ಹತ್ತಿದೆವು. ಎಲ್ಲರಿಗೂ ಸುಸ್ತಾಗಿತ್ತು. ಹಾಗಾಗಿ ಅಲ್ಲಿಯೇ ಇದ್ದ ಒಂದು ಬಂಡೆಯ ಮೇಲೆ ಕುಳಿತುಕೊಂಡು ಸ್ವಲ್ಪ ದಣಿವಾರಿಸಿಕೊಂಡೆವು. ಅಲ್ಲಿನ ಸುಂದರವಾದ ನಿಸರ್ಗವನ್ನು ನೋಡಿ ನನ್ನ ಮನಸ್ಸು ಹೇಳಿತು.
ಎಲ್ಲೆಲ್ಲೂ ಹಸಿರಿನ ವನಸಿರಿಯು ಮೈದಳೆದು
ಕೈ ಬೀಸಿ ಕರೆಯುತಿದೆ ತನ್ನ ಮಡಿಲಿಗೆ ಕಣ್ಮನಸೆಳೆದು
ಪ್ರಕೃತಿ ದೇವಿಯು ನೆಲೆಸಿಹಳು ಜೀವ ತಳೆದು.
ಸ್ವಲ್ಪ ವಿಶ್ರಾಂತಿಯ ನಂತರ ಮತ್ತೆ ಪರ್ವತವನ್ನು ಹತ್ತತೊಡಗಿದೆವು. ಆದರೆ ನಾನು ಅಂದುಕೊಂಡ ಹಾಗೆ ಪರ್ವತವನ್ನು ಹತ್ತುವುದು ಅಷ್ಟು ಸುಲಭದ ಮಾತಾಗಲಿಲ್ಲ. ತುಂಬಾನೆ ಆಯಾಸವಾಯಿತು. ಆದರೂ ಲೆಕ್ಕಿಸದೆ ಪರ್ವತವನ್ನು ಹತ್ತಿದೆವು. ತುಂಬಾನೆ ಖುಷಿಯಾಯಿತು. ಆ ಬೆಟ್ಟದ ಮೇಲೆ ನೆಲೆಸಿರುವ ನರಸಿಂಹ ಸ್ವಾಮಿಯನ್ನು ನೋಡಿ ಅಲ್ಲಿನ ಪುರಾತನದ ಕಥೆಯನ್ನು ತಿಳಿದುಕೊಂಡೆವು.
ಆಗ ನೆನಪಾದ ಒಂದು ಕವನ:
ಪ್ರಕೃತಿ ಅದೆಷ್ಟು ರಹಸ್ಯಗಳನ್ನು ತನ್ನೊಡಲಲ್ಲಿ ಅಡಗಿಸಿಕೊಂಡಿದೆ
ತೆರೆದಷ್ಟು ಗರಿಗೆದರುವ ಪುರಾತನದ ಮಹತ್ವಗಳು
ನಿಸರ್ಗದ ನಿಗೂಢತೆಯನ್ನು ಕಂಡು ಬೆರಗಾದೆ ನಾ
ದೇವರ ಸೃಷ್ಟಿಯಲ್ಲಿ ನಿಸರ್ಗ ವಿಸ್ಮಯಗಳ ತಾಣ.
ಅಲ್ಲಿಯ ಸೊಬಗನ್ನು ವರ್ಣಿಸಲು ಪದಗಳೇ ಸಾಲದು. ನಾನಂತೂ ಮೂಕವಿಸ್ಮಯಳಾಗಿ ಕುಳಿತುಕೊಂಡೆ. ಹಚ್ಚ ಹಸಿರಿನಿಂದ ಕೂಡಿದ ಈ ನರಸಿಂಹ ಪರ್ವತದ ಸುಂದರವಾದ ಪ್ರಕೃತಿಯಲ್ಲಿ ನಾನು ಕುಳಿತಾಗ ಮರೆತೆ ನನ್ನೆ ನಾನು.
ಎಂದೂ ಕಾಣದ ಸೊಬಗನ್ನು ಕಂಡೆ ಎಂದು ಹೇಳಿದವು ನನ್ನ ಕಣ್ಣುಗಳು
ಆಗ ನನ್ನ ಮನಸ್ಸು ಗರ್ವದಿಂದ ಹೇಳಿತು
ಈ ನಿಸರ್ಗದ ಸೌಂದರ್ಯವನ್ನು ಕಂಡಿದ್ದು ನನ್ನ ಪುಣ್ಯವೆಂದು.
ಅಂತೂ ಬಹುದಿನದ ಆಸೆ ಈಡೇರಿತು. ನರಸಿಂಹ ಪರ್ವತವನ್ನು ನೋಡಿ ಎಲ್ಲರೂ ಕ್ಷೇಮದಿಂದ ಮರಳಿದೆವು.
************************
ಪವಿತ್ರ ಎಸ್. ಕೆ
ಅತಿಥಿ ಶಿಕ್ಷಕರು
ಸ.ಹಿ.ಪ್ರಾ. ಶಾಲೆ ಗಂಡಘಟ್ಟ