ಕನ್ನಡ ಶಾಲೆ ಉಳಿಸುವ ಹೋರಾಟಕೆ ನಾ ಮುಂದೆ
ನನ್ನ ಮಕ್ಕಳನು ಹಳದಿ ವ್ಯಾನು ಹತ್ತಿಸಿ ಈಗ ಬಂದೆ!
ಕನ್ನಡದ ಉಳಿವಿಗೆ ಮಾಡುವೆ ಭಾಷಣ ಮೇಜುಕುಟ್ಟಿ
ಮಕ್ಕಳ ದುಬಾರಿ ಶಾಲೆಗೆ ಲಕ್ಷಗಟ್ಟಲೆ ಫೀಸು ಕಟ್ಟಿ
ಕನ್ನಡ ಶಾಲೆಗೆ ಕಳಿಸಲು ಹೆಚ್ಚು ಬಡವರಿಲ್ಲ
ಬಿಪಿಎಲ್ ಕಾರ್ಡುಗಳ ಸಂಖ್ಯೆ ಇಳಿಯುವುದೇ ಇಲ್ಲ
ಈ ಬೂಟಾಟಿಕೆಯಿಂದಲೇ ಕನ್ನಡ ಶಾಲೆಗೆ ಆಪತ್ತು
ಕೊಟ್ಟರೇನು ಬಂತು ನೂರಾರು ಪುಕ್ಕಟೆ ಸವಲತ್ತು
ತನ್ನ ಭಾಷೆಯಲಿ ಕಲಿತಾಗ ಮಾತ್ರ ಪರಿಪೂರ್ಣ ಕಲಿಕೆ
ಕಂಠಪಾಠಕೆ ಜೋತುಬೀಳದೆ ಬೆಳೆಯಲಿ ಸ್ವಂತಿಕೆ
ಸಾಕೇ ಸುಕ್ಕಿರದ ಸಮವಸ್ತ್ರ ಬೂಟುಕೋಟು ಓರಣ
ಬೇಡವೇ ನುರಿತ ಬೋಧನೆ ಅನುಭವದ ಹೂರಣ
ತಿಳಿವು ಆಳಕ್ಕಿಳಿದರಲ್ಲವೇ ಆಗುವುದು ಪಕ್ವ ಕಲಿಕೆ
ಬರಿದೇಕೆ ಕಳೆಯುವಿರಿ ದುಡಿದು ಕೂಡಿಟ್ಟ ಗಳಿಕೆ
ಚೆಂದವಿದ್ದರೆ ಸಾಕೇ ಪುಸ್ತಕದ ಹೊದಿಕೆ
ಆಗಬೇಡವೆ ಅರ್ಥಪೂರ್ಣ ಕಲಿಕೆ
ಸ್ವಚ್ಚಂದ ನಡಿಗೆ ಆಟಪಾಠಗಳಲಿ ಬಾಲ್ಯ ಅರಳಲಿ
ಬದುಕ ಕಲಿಸುವ ಕನ್ನಡ ಶಾಲೆಗಳತ್ತ ದೃಷ್ಟಿ ಹೊರಳಲಿ
ಕನ್ನಡ ಶಾಲೆಯೆಡೆಗೆ ಹೆಜ್ಜೆ ನಮ್ಮಿಂದ ಮೊದಲಾಗಲಿ
ಆಂಗ್ಲಭಾಷೆಯಲೇ ಭವಿಷ್ಯವೆಂಬ ಭಾವ ಬದಲಾಗಲಿ
************************
ಸುಜಾತ ಬಿ.
ಸ.ಹಿ.ಪ್ರಾ. ಶಾಲೆ. ಗಂಡಘಟ್ಟ