ಚಾರಣದ ಪತ್ರ
ಅಮೃತ ಎಚ್ . ಜಿ.
6ನೇ ತರಗತಿ,
ಸ.ಹಿ.ಪ್ರಾ. ಶಾಲೆ, ಗಂಡಘಟ್ಟ
ಗೆ,
ಮೇಘನಾ
D/o ಪ್ರಕಾಶ್ ಆಚಾರ್,
ರಂಭಾಪುರಿ ಮಠ,
ಎನ್. ಆರ್. ಪುರ,
ಚಿಕ್ಕಮಗಳೂರು
ಪ್ರೀತಿಯ ಗೆಳತಿ,
ಪ್ರೀತಿಯ ಗ್ರಳತಿ ಮೇಘನಾಳಿಗೆ ನನ್ನ ನಮಸ್ಕಾರಗಳು. ನಾನು ಇಲ್ಲಿ ಕ್ಷೇಮವಾಗಿರುವೆ, ನೀನೂ ಕೂಡ ಕ್ಷೇಮವಾಗಿರುವಿ ಎಂದು ನಂಬಿರುತ್ತೇನೆ. ನನ್ನ ಶಾಲೆಯಲ್ಲಿ 6 ಮತ್ತು 7 ನೆ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಎಸ್. ಡಿ ಎಂ.ಸಿ ಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪೋಷಕರು ನಮ್ಮ ಶೃಂಗೇರಿ ನರಸಿಂಹ ಪರ್ವತಕ್ಕೆ ಚಾರಣಕ್ಕೆ ಹೋದೆವು. ಭಾನುವಾರ 11-02-2024 ರಂದು ಸರಿಯಾಗಿ 8 ಗಂಟೆಗೆ ಚಾರಣಕ್ಕೆ ಹೊರಟೆವು.
ಚಾರಣಕ್ಕೆ ಹೊರಟಾಗ ನಮಗೆ ಎಲ್ಲಿಲ್ಲದ ಖುಷಿ,ಸಂತೋಷ. ನಾವು ಹತ್ತುವಾಗ ಸ್ವಲ್ಪ ಕಷ್ಟವಾಯಿತು. ಆದರೆ ಮೇಲೆ ತಲುಪಿದ ಮೇಲೆ ಆದ ಖುಷಿಯೇ ಬೇರೆ. ಅಲ್ಲಿಯ ದೇವರ ದರುಶನದಿಂದ ತುಂಬಾ ಖುಷಿಯಾಯಿತು.ಋಷಿಗಳ ಪಾದ, ಪಾಪದ ಕೊಳ ಮತ್ತು ಪುಣ್ಯದ ಕೊಳಗಳನ್ನು ನೋಡಿದೆ. ಇದನ್ನೆಲ್ಲ ನೋಡಿ ಆದ ನಂತರ ಲಿಂಬೆ ಹಣ್ಣಿನ ಪಾನಕ, ಅವಲಕ್ಕಿ ಮಾಡಿ ತಿಂದೆವು.ನಂತರ ಅಂತ್ಯಾಕ್ಷರಿ ಆಡಿದೆವು ಪೋಷಕರಿಂದ ನರಸಿಂಹ ಪರ್ವತದ ಹಿನ್ನೆಲೆಯನ್ನು ತಿಳಿದೆನು. ಅನಂತರ ಗ್ರೂಪ್ ಫೋಟೋ ತೆಗೆಸಿಕೊಂಡು ವಾಪಾಸ್ ಮನೆಗೆ ತೆರಳಿದೆವು.
ನೀನು ಎಂದಾದರೂ ನಮ್ಮ ಮನೆಗೆ ಬಂದರೆ ನಾವೆಲ್ಲ ಸೇರಿ ಮತ್ತೆ ನರಸಿಂಹ ಪರ್ವತಕ್ಕೆ ಹೋಗೋಣ.
ನಿನ್ನ ಉತ್ತರಕ್ಕಾಗಿ ಕಾಯುತ್ತಿರುವ,
ಸ್ಥಳ :ಗಂಡಘಟ್ಟ. ಇಂತಿ ನಿನ್ನ ಪ್ರೀತಿಯ ಗೆಳತಿ,
ದಿನಾಂಕ: 14:02:2024 ಅಮೃತ ಎಚ್ .ಜಿ.
_____________________________________________________________________________________________________________
ನರಸಿಂಹ ಪರ್ವತ
ಅಶ್ವಿತ ಎಸ್
6 ನೇ ತರಗತಿ
ಸ.ಹಿ.ಪ್ರಾ. ಶಾಲೆ ಗಂಡಘಟ್ಟ ಶೃಂಗೇರಿಯಲ್ಲಿರುವ ನರಸಿಂಹ ಪರ್ವತಕ್ಕೆ ನಮ್ಮ ಶಾಲೆಯಿಂದ 6 ಮತ್ತು 7 ನೇ ತರಗತಿಯವರು ಚಾರಣಕ್ಕೆ ಹೊರಟಿದ್ದೆವು. ಎಲ್ಲರೂ ಖುಷಿಯಿಂದ ಬೆಟ್ಟವನ್ನು ಹತ್ತಿದೆವು. ತುಂಬಾ ಸುಂದರವಾದ ಪ್ರಕೃತಿ .ಒಂದು ಪ್ಲಾಸ್ಟಿಕ್ ಕಸವಿಲ್ಲ. ಮರಗಿಡಗಳು ಮತ್ತು ಬಂಡೆಗಳು ಒಂದೊಂದು ಬಗೆಯಲ್ಲಿದ್ದವು. ಬಂಡೆಗಳ ಆಕಾರ ಬೇರೆ ಬೇರೆಯದಾಗಿತ್ತು.
ಪರ್ವತದ ಮೇಲೇರಿದ ಮೇಲೆ ತುಂಬಾ ಖುಷಿಯಾಯಿತು. ಪರ್ವತವನ್ನು ಹತ್ತುವಾಗ ಇದ್ದ ಕಾಲುನೋವು, ತಂಪಾದ ಗಾಳಿ ಬೀಸಿದಾಗ ಮಾಯವಾಯಿತು. ಮೊದಲ ಬಾರಿಗೆ ನಾನು ಪರ್ವತಕ್ಕೆ ಹೋಗಿದ್ದು , ಪರ್ವತದ ಮೇಲಿನ ಬಂಡೆಯ ಮೇಲೆ ಕುಳಿತು ಎತ್ತರವಾಗಿ ಬೆಳೆದಿರುವ ಹುಲ್ಲನ್ನು ನೋಡಿ ಅಚ್ಚರಿ ಪಟ್ಟೆ. ಪಾಪದ, ಪುಣ್ಯದ ಕೊಳವನ್ನು ನೋಡಿ ಪುಣ್ಯದ ಕೊಳದ ನೀರನ್ನು ತಲೆಯ ಮೇಲೆ ಹಾಕಿಕೊಂಡೆ.
ಹಾಗೆ ಮುಂದೆ ಹೋಗಿ ಬಂಡೆಯ ಮೇಲೆ ಕುಳಿತಾಗ ಕಡೆಯುವ ಕಲ್ಲನ್ನು ಕಂಡೆ. ಅಲ್ಲಿ ನರಸಿಂಹ ದೇವರನ್ನು ನೋಡಿ, ಋಷಿಗಳ ಪಾದವನ್ನು ನೋಡಿ ನಮಸ್ಕಾರ ಮಾಡಿದೆ. ಮಧ್ಯಾಹ್ನ ಅವಲಕ್ಕಿ ತಿಂದು, ಶರಬತ್ತು ಕುಡಿದೆ. ನಂತರ ಹಿಂದೆ ವಾಸವಿದ್ದ ಪಾರ್ವತಮ್ಮನ ಮನೆಯನ್ನು ನೋಡಿದೆ. ಆಗ ನನಗನ್ನಿಸಿದ್ದು ಅವರು ಒಬ್ಬರೇ ದಟ್ಟ ಕಾಡಿನಲ್ಲಿ ಹೇಗಿರುತ್ತಿದ್ದರು ಎಂದು? ನಮ್ಮ ಶಾಲೆಯ ಪೋಷಕರಿಂದ ನರಸಿಂಹ ಪರ್ವತದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡೆ. ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರವು ಸಹ ಸಿಕ್ಕಿತು. ನಂತರ ಅಲ್ಲಿಂದ ಹೊರಟು ದಾರಿಯ ಮಧ್ಯೆ ತಿಂಡಿ ತಿಂದು ಮನೆಯ ಕಡೆಗೆ ಹೊರಟೆವು.
ನಗರಗಳಲ್ಲಿ ನೋಡಿದರೆ ಮರಗಳೇ ಕಾಣುವುದಿಲ್ಲ. ಈ ಪರ್ವತದ ಮೇಲೆ ಎಲ್ಲಿ ನೋಡಿದರೂ ಮರಗಳೇ, ಹಾಗೂ ತಣ್ಣನೆಯ ಗಾಳಿ.
-------------------------------------------------------------------------------------------------------------------------
ನರಸಿಂಹ ಪರ್ವತ
ಅನನ್ಯ ಎ . ಶೆಟ್ಟಿ ,
6 ನೇ ತರಗತಿ
ಸ.ಹಿ.ಪ್ರಾ.ಶಾಲೆ. ಗಂಡಘಟ್ಟ
ನಾವು ಶಾಲೆಯಿಂದ ಚಾರಣಕ್ಕಾಗಿ ನರಸಿಂಹ ಪರ್ವತಕ್ಕೆ ಹೋಗಿದ್ದೆವು. 6 ಮತ್ತು 7 ನೆ ತರಗತಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಪೋಷಕರು ಎಲ್ಲರೂ ಒಟ್ಟಾಗಿ ಹೊರಟಿದ್ದೆವು. ನಾವು ಪರ್ವತವನ್ನು ಹತ್ತುವಾಗ ತುಂಬಾ ದೂರ ಇದೆ, ಹತ್ತುವುದು ಹೇಗೆ ಎಂದು ಅಂದುಕೊಂಡಿದ್ದೆವು. ಪರ್ವತವನ್ನು ಹತ್ತಿದ ಮೇಲೆ ಎಲ್ಲರೂ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆವು. ಅಲ್ಲಿ ತುಂಬಾ ತಂಪಾದ ಗಾಳಿ ಬೀಸುತ್ತಿತ್ತು.
ಹಾಗೇ ಮೇಲೆ ಹೋದಾಗ ಇನ್ನೊಂದು ಕಡೆಯಲ್ಲಿ ನರಸಿಂಹ ದೇವರು, ಒಂದು ಬಂಡೆ ಮೇಲೆ ಶಿವ ಮತ್ತು ಋಷ್ಯಶೃಂಗರ ಪಾದದ ಗುರುತು ಇತ್ತು. ಮೇಲಿಂದ ನೋಡಿದಾಗ ಸುಂದರವಾದ ಪರಿಸರ ಕಾಣುತ್ತಿತ್ತು. ಅದನ್ನು ನೋಡಿ ಖುಷಿಯಾಯಿತು. ಮೊದಲು ಅಲ್ಲಿರುವ ಪಾಪದ ಕೊಳದ ನೀರನ್ನು ತಲೆಯ ಮೇಲೆ ಹಾಕಿಕೊಂಡು, ನಂತರ ಪುಣ್ಯದ ಕೊಳದ ನೀರನ್ನು ತಲೆಯ ಮೇಲೆ ಹಾಕಿಕೊಂಡೆವು. ನಮ್ಮ ಶಿಕ್ಷಕರು ಹೇಳಿದ್ರು ಹಿಂದೆ ಋಷಿಗಳು ತಪಸ್ಸು ಮಾಡಲು ಬರುತ್ತಿದ್ದರು, ಅವರು ಪಾಪದ ಕೊಳದಲ್ಲಿ ಸ್ನಾನ ಮಾಡಿ ನಂತರ ಪುಣ್ಯದ ಕೊಳದಿಂದ 3 ತಂಬಿಗೆ ನೀರನ್ನು ತಲೆಯ ಮೇಲೆ ಹಾಕಿಕೊಳ್ಳುತ್ತಿದ್ದರಂತೆ.
ನಾವು ವಿಶ್ರಾಂತಿ ಪಡೆಯಲು ಇನ್ನೊಂದು ಬಂಡೆಯ ಮೇಲೆ ಕುಳಿತೆವು. ಅಲ್ಲಿ ಖಾರವನ್ನು ಕಡೆಯುವ ಕಲ್ಲು ಇತ್ತು. ಅಲ್ಲಿಯೇ ಕುಳಿತು ಶಿಕ್ಷಕರು ಮಾಡಿದ ಪಾನಕವನ್ನು ಕುಡಿದೆವು. ಎಲ್ಲರೂ ಸೌತೆಕಾಯಿ ತಿಂದೆವು. ನರಸಿಂಹ ಪರ್ವತದ ಹಿಂದಿನ ಕಥೆಗಳನ್ನು ಪೋಷಕರು ಹೇಳಿದರು. ಕಿಗ್ಗ ದೇವಸ್ಥಾನದ ಬಸವನ ಕಥೆಯನ್ನು ನಮಗೆ ಹೇಳಿದರು. ಪರ್ವತದ ಮೇಲೆ ವಾಸವಿದ್ದ ಪಾರ್ವತಮ್ಮನವರ ಮನೆಯನ್ನು ತೋರಿಸಿದರು. ಅವರ ಮನೆಯ ಗೋಡೆಗಳು ಬಿದ್ದು ಹೋಗಿತ್ತು. ಅಷ್ಟು ದೊಡ್ಡ ಕಾಡಿನಲ್ಲಿ ಅವರು ಒಬ್ಬರೇ ವಾಸವಿದ್ದರಾ ಎಂದು ಒಂದು ಕ್ಷಣ ಭಯವಾಯಿತು.
ಅದನ್ನೆಲ್ಲ ನೋಡಿ ಬೆಟ್ಟದಿಂದ ಇಳಿಯಲು ಪ್ರಾರಂಭಿಸಿದೆವು.ಇಳಿಯುತ್ತಾ ನನಗೆ ತುಂಬಾ ಭಯವಾಯಿತು. ಏಕೆಂದರೆ ಎಲ್ಲಿ ಕಲ್ಲು ತಾಗಿ ಬೀಳುತ್ತೇವೆ ಎಂದು. ಸ್ವಲ್ಪ ದೂರ ನಡೆದ ಮೇಲೆ ಅಲ್ಲೊಂದು ದೊಡ್ಡ ಬಂಡೆ ಕಾಣಿಸಿತು. ಅದರ ಮೇಲೆ ಕುಳಿತು ಹಣ್ಣು, ತಿಂಡಿ ತಿಂದು ಮತ್ತೆ ಇಳಿಯಲು ಶುರು ಮಾಡಿದೆವು. ಅಂತೂ ಕೆಳಗೆ ಇಳಿದು ಬಂದೆವು. ಅಲ್ಲೇ ಒಂದು ಮನೆ ಇತ್ತು. ಅಲ್ಲಿಂದ ಶಿಕ್ಷಕರು ನಮಗೆ ನೀರನ್ನು ತಂದು ಕೊಟ್ಟರು .ನೀರು ಕುಡಿದು ಸ್ವಲ್ಪ ವಿಶ್ರಾಂತಿ ಪಡೆದೆವು. ಆಮೇಲೆ ಕಿಗ್ಗ ದೇವಸ್ಥಾನದ ಎದುರು ಬಂದೆವು. ಸ್ವಲ್ಪ ಮಕ್ಕಳು ಆಟೋದಲ್ಲಿ ಮನೆಗೆ ಹೋದರೆ ಸ್ವಲ್ಪ ಮಕ್ಕಳು ಪೋಷಕರೊಂದಿಗೆ ಮನೆಗೆ ಮರಳಿದೆವು. ತುಂಬಾ ಚೆನ್ನಾಗಿ ಚಾರಣ ಮುಗಿಸಿದೆವು.
_________________________________________________________________________________________________________
ನರಸಿಂಹ ಪರ್ವತ
ಪ್ರಖ್ಯಾತ್ ಎಚ್ .ಎ
6ನೇ ತರಗತಿ, ನಮ್ಮ ಶಾಲೆಯಿಂದ ಚಾರಣವನ್ನು ಆಯೋಜಿಸಿದ್ದರು. ನರಸಿಂಹ ಪರ್ವತಕ್ಕೆ 6 ಮತ್ತು 7 ನೇ ತರಗತಿಯವರು ಹೋಗಿದ್ದೆವು. ತುಂಬಾ ಖುಷಿಯಿಂದ ಹೋದೆವು. ಸ್ವಲ್ಪ ದೂರ ಹೋದ ನಂತರ ವಿಶ್ರಾಂತಿ ಪಡೆಯಲು ಒಂದು ದೊಡ ಬಂಡೆಯ ಮೇಲೆ ಕುಳಿತೆವು. ನಂತರ ತುಂಬಾ ದೂರ ನಡೆದು ನರಸಿಂಹ ಪರ್ವತವನ್ನು ತಲುಪಿದೆವು. ನಂತರ ನರಸಿಂಹ ದೇವರನ್ನು ನೋಡಿದೆವು. ಸೌತೆಕಾಯಿ ಮತ್ತು ಅವಲಕ್ಕಿಯನ್ನು ತಿಂದೆವು. ಅಲ್ಲಿಂದ ಹೊರಟು ಪಾರ್ವತಮ್ಮನ ಮನೆ, ಪಾಪದ ಮತ್ತು ಪುಣ್ಯದ ಕೊಳವನ್ನು ನೋಡಿ ಹೊರಟೆವು. ಅಲ್ಲಿಂದ ಬರುವಾಗ ವಿಶ್ರಾಂತಿ ಪಡೆಯಲು ದೊಡ್ಡ ಬಂಡೆಯ ಮೇಲೆ ಕುಳಿತೆವು. ಅಲ್ಲಿ ತಿಂಡಿಯನ್ನು ತಿಂದು ಪರ್ವತವನ್ನು ಇಳಿದು ಮನೆಗೆ ಹಿಂತಿರುಗಿದೆವು.
Comments