ಇಂದು ಫೆಬ್ರವರಿ 11, 2024 ರ ಭಾನುವಾರ. ನಾನು, ನನ್ನ ಪುಟ್ಟ ಕುಟುಂಬದೊಂದಿಗೆ ಶೃಂಗೇರಿಯಿಂದ 13 ಕಿ.ಮೀ ದೂರದಲ್ಲಿರುವ ನರಸಿಂಹ ಪರ್ವತಕ್ಕೆ ಚಾರಣಕ್ಕೆಂದು ಹೊರಟೆ. ಮುಂಜಾವಿನ ಚಳಿಯಲ್ಲಿ ನಾನು ನಮ್ಮ ಗುಂಪನ್ನು ಕಿಗ್ಗ ದೇವಸ್ಥಾನದ ಬಳಿ ಸೇರಿಕೊಂಡೆ. ನಾನು ಪ್ರತಿದಿನ ಶಾಲೆಗೆ ಬರುವಾಗ ನರಸಿಂಹ ಪರ್ವತವನ್ನು ನೋಡುತ್ತಿದ್ದೆ. ಅದನ್ನು ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕೆನ್ನುವ ಆಸೆ ಇತ್ತು .ಇಂದು ಆ ಆಸೆ ಈಡೇರುವ ಸಮಯ.
ಶಾಲಾ ಶಿಕ್ಷಕರು, ಮಕ್ಕಳು ಮತ್ತು ಪೋಷಕರನ್ನು ಒಳಗೊಂಡ ನಮ್ಮ ತಂಡದ ಚಾರಣ ಪ್ರಾರಂಭವಾಗಿದ್ದು ಕಾಲ್ನಡಿಗೆಯಲ್ಲಿ. ದೇವರಿಗೆ ನಮಸ್ಕರಿಸಿ ನಮ್ಮೆಲ್ಲರ ಪಯಣ ಸುಖಕರವಾಗಿರಲೆಂದು ಬೇಡಿಕೊಂಡು ಮುಂದೆ ಸಾಗಿದೆವು. ಎಲ್ಲರ ಹೆಗಲ ಮೇಲೂ ಒಂದೊಂದು ಚೀಲ. ಆ ಚೀಲದಲ್ಲಿ ನೀರಿನ ಬಾಟಲಿಗಳು, ದಾರಿಯ ಮಧ್ಯದಲ್ಲಿ ಬೇಕಾಗುವ ತಿನಿಸುಗಳು ಇದ್ದವು. ಕಾಡಿನ ಮಧ್ಯದಲ್ಲಿ ಹೋಗುವ ಕಾಲುದಾರಿ, ಒಬ್ಬರೇ ನಡೆಯುವಷ್ಟು ಜಾಗ ಮಾತ್ರ. ಒಬ್ಬರು ಜಾರಿ ಬಿದ್ದರೆ ಎಲ್ಲರೂ ಒಟ್ಟಿಗೆ ಬೀಳುವಂತಹ ದಾರಿ. ಕಾಡಿನಲ್ಲಿ ಸಾಗುತ್ತ ಎಷ್ಟೋ ವರ್ಷದ ಗಟ್ಟಿಮುಟ್ಟಾದ ಗಿಡಮರಗಳು, ಹಕ್ಕಿಗಳ ಕಲರವ, ಕಾಡು ಹಣ್ಣುಗಳು, ಕಾಡಿನ ತಂಗಾಳಿ, ಗಿಡಗಳ ಮಧ್ಯೆ ಓಡಾಡುವ ಪುಟ್ಟ ಪ್ರಾಣಿಗಳನ್ನು ಗಮನಿಸಿದೆವು. ನಾವು ಮಕ್ಕಳೊಂದಿಗೆ ಹರಟುತ್ತಾ ಮಧ್ಯ ದಾರಿಗೆ ಬಂದೆವು.
ಅಲ್ಲೊಂದು ದೊಡ್ಡ ಕರಿದಾದ ಬಂಡೆ. ಅದರ ಮೇಲೆ ಕುಳಿತು ವಿಶ್ರಾಂತಿ ಪಡೆದು ಮುಂದೆ ನಡೆಯುತ್ತ ಹೋದೆವು. ಬೆಟ್ಟದ ಹತ್ತಿರ ಬಂದೆವು. ಹತ್ತಿರ ಬಂದು ಮೇಲೆ ನೋಡಿದರೆ ಜಾರುಬಂಡೆಯಂತ ದಾರಿ. ಅದನ್ನು ದಾಟಿ 10 ಗಂಟೆಗೆ ಬೆಟ್ಟವನ್ನು ತಲುಪಿದೆವು. ಬೆಟ್ಟದ ಮೇಲೇರುತ್ತ ಹೋದಂತೆ ತಂಪಾದ ಗಾಳಿ, ಅತಿ ಹೆಚ್ಚು ಬಿಸಿಲು, ಹಾಗೆ ನಡೆದು ಮುಂದೆ ಸಾಗಿದಾಗ ನಮಗೆ ಮೊದಲು ಕಂಡಿದ್ದು ಪುಣ್ಯ ಮತ್ತು ಪಾಪದ ಕೊಳಗಳು, ಅದರಿಂದ ನೀರು ತೆಗೆದು ತಲೆಯ ಮೇಲೆ ಹಾಕಿಕೊಂಡು, ಸ್ವಲ್ಪ ನೀರು ಕುಡಿದು, ಪರ್ವತದ ಮೇಲೆ ನೆರಳಿರುವ ಜಾಗಕ್ಕೆ ಬಂದೆವು. ಅಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ನಡೆಯುತ್ತಾ ಪರ್ವತದ ತುತ್ತ ತುದಿಯನ್ನು ತಲುಪಿಯೇ ಬಿಟ್ಟೆವು. ಅಲ್ಲಿ ಮೊದಲು ನರಸಿಂಹ ದೇವರನ್ನು ಕಂಡೆವು. ದೇವರಿಗೆ ನಮಸ್ಕರಿಸಿ ದೇವರ ಎದುರಿನಲ್ಲಿರುವ ಬಸವಣ್ಣ, ಕಲ್ಲಿನ ದೀಪಗಳನ್ನು ನೋಡಿ, ಅಲ್ಲೇ ಎತ್ತರದ ಬಂಡೆಯ ಮೇಲಿರುವ ವಿಭಾಂಡಕ ಮುನಿಗಳ ಪಾದಕ್ಕೆ ನಮಸ್ಕರಿಸಿದೆವು. ಹಾಗೆ ಮುಂದೆ ಹೋದೆವು.
ಅಲ್ಲಿ ದೊಡ್ಡ ಬಂಡೆಯ ಕಲ್ಲಿನ ಮೇಲೇರಿ ನಿಂತೆವು . ನಮಗೆ ಕಂಡದ್ದು ಸುಂದರವಾದ ಆ ದೃಶ್ಯ. ಅದೇನೆಂದರೆ ದೂರದಲ್ಲಿ ಕಾಣುವ ಬೇರೆ ಪರ್ವತಗಳು ಒಟ್ಟಿಗೆ ಸೇರಿಕೊಂಡಂತೆ, ಪರ್ವತ ಆಕಾಶಕ್ಕೆ ಅಂಟಿಕೊಂಡಿದೆಯೇನೋ ಅನ್ನಿಸುತ್ತಿತ್ತು. ಬೆಟ್ಟದ ಮಧ್ಯದಲ್ಲಿ ಕಡುಹಸಿರು ಬಣ್ಣದ ಮರಗಳು, ಪರ್ವತದ ಮೂಲೆಗಳಲ್ಲಿ ಕಾಣಿಸುತ್ತಿದ್ದ ಮಂಜು, ಕೆಳಗೆ ನೋಡಿದರೆ ಭಯವಾಗುವ ಆಳ, ದೂರದಲ್ಲಿ ಬೆಂಕಿಪೊಟ್ಟಣಗಳಂತೆ ಕಾಣುವ ಮನೆಗಳು, ಅಲ್ಲಲ್ಲಿ ಪ್ರಾಣಿಗಳು ಓಡಾಡಿರುವ ಜಾಗ. ಇದೆಲ್ಲ ಪ್ರಕೃತಿಯು ನಮಗೆ ನೀಡಿರುವ ಉಡುಗೊರೆಯಂತೆ ಭಾಸವಾಗುತ್ತಿತ್ತು. ತುಂಬಾ ಹೊತ್ತು ಅಲ್ಲೇ ಕುಳಿತು ಮನಸ್ಸಿನಲ್ಲಿ ಇಂತಹ ಅದ್ಭುತವ ನೋಡಲು ಅವಕಾಶ ಸಿಕ್ಕಿತಲ್ಲ ಎಂದು ನಮ್ಮ ತಂಡಕ್ಕೆ ಧನ್ಯವಾದ ತಿಳಿಸಿದೆ. ಬೆಟ್ಟದ ತುತ್ತತುದಿಯಿಂದ ಇಳಿದು ನೆರಳಿರುವ ಜಾಗಕ್ಕೆ ಮತ್ತೆ ಬಂದು ಕುಳಿತೆವು. ಆಗ ಮಧ್ಯಾಹ್ನದ ಸಮಯ ಚೀಲದಲ್ಲಿರುವ ಎಳೆಸೌತೆಕಾಯಿ ತಿಂದು, ಪಾನಕವನ್ನು ಕುಡಿದು, ಅವಲಕ್ಕಿಯನ್ನು ಮೊಸರು ಸಕ್ಕರೆಯೊಂದಿಗೆ ಸೇರಿಸಿ ಸವಿದೆವು. ಮಕ್ಕಳೊಂದಿಗೆ ಅಂತ್ಯಾಕ್ಷರಿ ಆಟವನ್ನು ಆಡಿದೆವು.
ನರಸಿಂಹ ಪರ್ವತದ ವಿಶೇಷತೆಯೇನು ಎಂಬ ತಿಳಿಯುವ ಕುತೂಹಲ. ಪರ್ವತದ ಕುರಿತು ಕೆಲವು ಪಶ್ನೆಗಳು. ಇವೆಲ್ಲದಕ್ಕೂ ಸರಿಯಾದ ಮಾಹಿತಿಯನ್ನು ಪೋಷಕರು ನಮ್ಮ ಮುಂದಿಟ್ಟರು. ವಿಭಾಂಡಕ ಮುನಿಗಳು, ನರಸಿಂಹ ದೇವರು, ಋಷ್ಯಶೃಂಗ ದೇವರು, ಕೊಳಗಳ ಮಹತ್ವ, ಪರ್ವತದ ಮೇಲಿದ್ದ ಅಜ್ಜಿಯ ಮನೆ, ಗೋಡೆಗಳು ಮಾತ್ರ ಉಳಿದಿರುವ ಮನೆಗಳ ಚಿತ್ರಣವನ್ನು, ಅವುಗಳ ಹಿನ್ನಲೆಯನ್ನು ವಿವರಿಸಿದರು. ಪರಿಸರದ ಸೊಬಗನ್ನು ಮನಸ್ಸಿನಲ್ಲಿ ತುಂಬಿಕೊಂಡು ,ಜಂಗಮವಾಣಿಯಲ್ಲಿ ಸೆರೆಹಿಡಿದುಕೊಂಡು ಅಲ್ಲಿಂದ ಹೊರಟೆವು. ಇನ್ನು ಸ್ವಲ್ಪಸಮಯ ಅಲ್ಲೇ ಇದ್ದಿದ್ದರೆ ಸುಂದರವಾದ ಸೂರ್ಯಾಸ್ತವನ್ನು ನೋಡಬಹುದಿತ್ತು. ಹಾಗೆ ಬೆಟ್ಟವನ್ನು ಬಿಟ್ಟು ಬರಬೇಕಾದರೆ ಬೇಸರವಾಯಿತು.
ಎಲ್ಲಿ ಬೀಳುತ್ತೇನೊ ಎಂಬ ಭಯದಿಂದ ಅಮೆಗತಿಯಲ್ಲಿ ನಡೆಯುತ್ತ ಪರ್ವತದಿಂದ ಇಳಿಯತೊಡಗಿದೆವು . ಅಂತು ಸಂಜೆ 5.30 ರ ಹೊತ್ತಿಗೆ ಬೆಟ್ಟದಿಂದ ಇಳಿದು ಕಿಗ್ಗ ದೇವಸ್ಥಾನದ ಎದುರು ಬಂದೆವು. ನಮ್ಮ ಚಾರಣ ಸುಖಮಯವಾಗಿ ನೆರವೇರಿತು. ಮಕ್ಕಳ ನಗು, ಮಾತು, ಅವರ ನಡಿಗೆ, ಉತ್ಸಾಹ ಇವೆಲ್ಲವೂ ಚಾರಣದಲ್ಲಿ ನಮ್ಮನ್ನು ಹುರಿದುಂಬಿಸಿತ್ತು. ಕಲ್ಲುಬಂಡೆಗಳಿಂದ ಕೂಡಿದ ಪರ್ವತ ನೋಡಲು ಎಷ್ಟು ಸುಂದರ. ಪ್ರಕೃತಿ ನಮ್ಮೆಲ್ಲರ ಆಸ್ತಿ ಅದನ್ನು ರಕ್ಷಿಸೋಣ, ಮುಂದಿನ ಪೀಳಿಗೆಯವರಿಗೆ ನಮ್ಮ ಅನುಭವವನ್ನು ತಿಳಿಸೋಣ. ಅವಕಾಶ ಸಿಕ್ಕರೆ ನೀವು ಹೋಗಿ ಪರ್ವತದ ಸೊಬಗನ್ನು ಕಣ್ತುಂಬಿಕೊಳ್ಳಿ.
************************
ಸುಮ ಹೆಚ್.ಡಿ
ಅತಿಥಿ ಶಿಕ್ಷಕರು
ಸ.ಹಿ.ಪ್ರಾ. ಶಾಲೆ ಗಂಡಘಟ್ಟ
👌👌👌 exalent words